Date : 24/01/2018

ಕೋಟಿ ಗಾಯತ್ರಿ ಜಪ ಮಹಾಯಜ್ಞಕ್ಕೆ ಚಾಲನೆ


24ನೇ ಕೋಟಿ ಗಾಯತ್ರಿ ಜಪ ಮಹಾಯಜ್ಞಕ್ಕೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸದಲ್ಲಿ ಗಾಯತ್ರಿ ತಪೋಭೂಮಿಯಲ್ಲಿ ಸೋಮವಾರ ಋತ್ವಿಜ ಸಮುದಾಯದ ವೇದಘೋಷಗಳ ನಡುವೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಬೆಳಗಿನಜಾವ 5 ಗಂಟೆಗೆ ಗಾಯತ್ರ್ಯಾದಿ ದೇವತೆಗಳಿಗೆ ರುದ್ರಾಭಿಷೇಕ, ಕಾಕಡಾರತಿ ಜರುಗಿದ ನಂತರ ಮಹಾಗಣಪತಿ ಪೂಜೆ, ಅಗ್ನಿ ಪ್ರತಿಷ್ಠಾಪನೆ, ಕಲಶ ಸ್ಥಾಪನೆ ಹಾಗೂ ಲಕ್ಷ ಮೋದಕ ಗಣಪತಿ ಹೋಮ ನೆರವೇರಿತು.

ತಪೋಭೂಮಿ ಆವರಣದಲ್ಲಿ ಬೆಳಗ್ಗೆ 350 ಪುರೋಹಿತರು ಲಕ್ಷ ಮೋದಕ ಗಣಪತಿ ಹೋಮವನ್ನು ನೆರವೇರಿಸಿದರು. 24 ಕುಂಡಗಳಲ್ಲಿ ಗಾಯತ್ರಿ ಹೋಮ, ಇನ್ನುಳಿದ ಕುಂಡಗಳಲ್ಲಿ ನಿತ್ಯ ಸುದರ್ಶನ ಹೋಮ, ಚಂಡಿ ಹೋಮ, ರುದ್ರಸ್ವಾಹಕ ಹೋಮ ಸೇರಿದಂತೆ ವಿವಿಧ ಹೋಮಗಳು ಜರುಗಿದವು. ಭತ್ತ, ಎಳ್ಳು, ಮೋದಕ, ತುಪ್ಪ, ಸಮೀದೆ, ಪಾಯಸ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ವಿಧ್ಯುಕ್ತ ಹೋಮಕ್ಕೆ ಬಳಸಲಾಯಿತು.

ಋತ್ವಿಜರು ಮಂತ್ರೋಚ್ಛಾರಣೆ ಯೊಂದಿಗೆ ಹೋಮ ಪ್ರಾರಂಭಿಸುತ್ತಿದ್ದಂತೆ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಗಾಯತ್ರಿ ಮಂತ್ರ ಉಚ್ಚರಿಸತೊಡಗಿದರು. ಮತ್ತೊಂದೆಡೆ ನೂರಾರು ಮಹಿಳೆ ಯರು, ಪುರುಷರು ಶ್ರೀ ಗಾಯತ್ರಿ ಕೋಟಿ ಕುಂಕುಮಾರ್ಚನೆಯನ್ನು ಭಕ್ತಿ- ಭಾವ ದಿಂದ ನೆರವೇರಿಸಿದರು.
ಕೂಡಲೀ ಶೃಂಗೇರಿ ಮಹಾಸಂಸ್ಥಾನದ ಶ್ರೀ ಡಾ. ವಿದ್ಯಾಭಿನವ ವಿದ್ಯಾರಣ್ಯಭಾರತೀ ಮಹಾಸ್ವಾಮೀಜಿ, ಶಿರಸಿಯ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸನ್ನಿಧಿಯಲ್ಲಿ ಶ್ರೀ ಶಂಕರ ಅಷ್ಟೋತ್ತರ ಪಾರಾಯಣ ಜರುಗಿತು.

ನಂತರ ಆಶೀರ್ವಚನ ನೀಡಿದ ಸ್ವರ್ಣ ವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಹೋಮ-ಹವನಗಳಿಂದ ದೇವತೆಗಳು ಸಂತೃಪ್ತರಾಗಿ ಮಳೆ ಸುರಿಸು ತ್ತಾರೆ. ಇದರಿಂದ ಬರಗಾಲ ದೂರವಾಗಿ ಎಲ್ಲೆಡೆ ಸಮೃದಿಟಛಿಯ ವಾತಾವರಣ ನಿರ್ಮಾಣ ಗೊಳ್ಳುತ್ತದೆ ಎಂದರು.
ಯಜ್ಞಗಳಿಂದ ಭಾರತೀಯ ಸೈನಿಕರ ಆತ್ಮವಿಶ್ವಾಸ ಇಮ್ಮಡಿಗೊಳ್ಳಲಿ. ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಕುಟುಂಬಗಳಿಗೆ ಒಳಿತಾಗಲಿ. ದೇಶಸೇವೆಯಲ್ಲಿ ತೊಡಗಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಲಿ ಎಂದರು.

ನಂತರ ಲಕ್ಷ ಮೋದಕ ಗಣಪತಿ ಹೋಮ ವೀಕ್ಷಿಸಿ ಆಶೀರ್ವಚನ ನೀಡಿದ ಕೂಡಲಿ ಶೃಂಗೇರಿ ಮಠದ ಡಾ. ವಿದ್ಯಾಭಿನವ ವಿದ್ಯಾರಣ್ಯಭಾರತೀ ಸ್ವಾಮೀಜಿ, ‘ಯಾವುದೇ ಕೆಲಸ ಮಾಡಬೇಕೆಂದರೆ ಶ್ರದೆಟಛಿ ಹಾಗೂ ಆಸಕ್ತಿ ಇರಬೇಕು. ಅಂದಾಗ ಮಾತ್ರ ಆ ಕೆಲಸ ಪರಿಪೂರ್ಣವಾಗಲು ಸಾಧ್ಯ. ಶ್ರದ್ಧೆ ಇದ್ದರೆ ಮಾತ್ರ ಮನಸ್ಸು ತನ್ನ ಕಾರ್ಯದಲ್ಲಿ ಸಂಪೂರ್ಣ ವಾಗಿ ತೊಡಗಿಕೊಳ್ಳುತ್ತದೆ’ ಎಂದರು.

ಮಾನವ ಜೀವನದ ಪರಮೋಚ್ಛ ಗುರಿ ಭಗವಂತನ ಅನುಗ್ರಹ ಪಡೆದು ಕೊಳ್ಳುವುದಾಗಿದೆ. ಭಗವಂತನ ಬಗ್ಗೆ ನಂಬಿಕೆ ಇರಬೇಕು. ಸದಾ ಆತನ ಸ್ಮರಣೆ ಮಾಡಬೇಕು. ಕಲಿಯುಗದಲ್ಲಿಯೂ ಯಜ್ಞ, ಹೋಮಗಳು ನಡೆಯುತ್ತಿರುವುದು ಮಾನವನಲ್ಲಿ ಇಂದಿಗೂ ಉತ್ತಮ ಗುಣಗಳಿರುವುದರ ದ್ಯೋತಕ ಎಂದು ವಿವರಿಸಿದರು.

ಶಿವಮೊಗ್ಗದ ವಿದ್ವಾನ್ ಎಲ್. ವಾಸುದೇವ ಭಟ್ ಪ್ರವಚನ ನೀಡಿದರು. ನಂತರ ಭಕ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯ-ಹೊರರಾಜ್ಯದಿಂದ ಆಗಮಿಸಿರುವ ಸಾವಿರಾರು ಜನ ಪಾಲ್ಗೊಂಡಿದ್ದಾರೆ. ಜ. 29ರವರೆಗೆ ಗಾಯತ್ರಿ ತಪೋಭೂಮಿಯಲ್ಲಿ ನಿತ್ಯವೂ ಹೋಮ ಹವನಾದಿಗಳು ನಡೆಯಲಿವೆ. 24ನೇ ಕೋಟಿ ಗಾಯತ್ರಿ ಮಹಾಯಜ್ಞ ಸಮಿತಿ ಹಾಗೂ ಶ್ರೀ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ನವರು ಪ್ರತಿಯೊಂದು ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಯೂಟ್ಯೂಬ್ನಲ್ಲಿ ಗಾಯತ್ರಿ ಜಪಯಜ್ಞ: ಕೋಟಿ ಗಾಯತ್ರಿ ಜಪಯಜ್ಞದ ಕಾರ್ಯಕ್ರಮಗಳನ್ನು ವೀಕ್ಷಕರು ಯೂಟ್ಯೂಬ್ ಗಾಯತ್ರಿ ಚಾನೆಲ್ನಲ್ಲಿ ನೋಡಬಹುದಾಗಿದೆ. ಆಸಕ್ತರು ಯೂಟ್ಯೂಬ್ನಲ್ಲಿ ಗಾಯತ್ರಿ ಟಿವಿ ಎಂದು ನಮೂದಿಸಿ ಸಬ್ಸ್ಕೈಬ್ ಮಾಡಿದರೆ ಅವರಿಗೆ ವಿಡಿಯೋಗಳ ಪೂರ್ಣ ಮಾಹಿತಿ ಸಿಗುವುದು ಎಂದು ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ ತಿಳಿಸಿದ್ದಾರೆ.

ಕೋಟಿ ಕುಂಕುಮಚಾರ್ಚನೆ
ಇನ್ನೊಂದು ಮಹಾಮಂಟಪದಲ್ಲಿ ಕೋಟಿ ಕುಂಕುಮಾರ್ಚನೆಗೂ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಸುಮಂಗಲೆಯರು ಗಾಯತ್ರಿದೇವಿಗೆ ಕುಂಕುಮ ಅರ್ಪಿಸುವ ಮೂಲಕ ಭಕ್ತಿ ರೀತಿಯಲ್ಲಿ ಸಿದ್ದಗೊಂಡಿರುವ ವಿವಿಧ ಭಕ್ತಿ ಮಂಟಪದಲ್ಲಿ ವೇದಗಳ ನಿನಾದ ನಡೆದು ನೆರೆದ ಭಕ್ತ ಸಾಗರವನ್ನು ಭಾವಪರವಶ ಮಾಡಿತು.