Date : 05/01/2018

ಯತಿವರೇಣ್ಯರ ಸಾನಿಧ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಭವ


ಲೋಕ ಕಲ್ಯಾಣಾರ್ಥವಾಗಿ ಹುಬ್ಬಳ್ಳಿಯ ತಡಸದ ಬಳಿಯ ಗಾಯತ್ರಿ ತಪೋಭೂಮಿಯಲ್ಲಿ ಜ.22ರಿಂದ 29ರವರೆಗೆ ಒಂದು ವಾರಗಳ ಕಾಲ ನಡೆಯುವ ‘24ನೇ ಕೋಟಿ ಗಾಯಿತ್ರಿ ಜಪ ಮಹಾಯಜ್ಞ’ ಹಾಗೂ ‘18ನೇ ಗಾಯಿತ್ರಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದ್ದು, ದೇಶದ ಸಂತವರೇಣ್ಯರ ಸಮ್ಮುಖದಲ್ಲಿ, ನಾಡಿನ ಖ್ಯಾತ ವೈದಿಕರ ನೇತೃತ್ವದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಜತೆಗೆ ಜನಪ್ರಿಯ ಕಲಾವಿದರಿಂದ ಸಾಂಸ್ಕೃತಿಕ ರಸದೌತಣವೂ ಸಿಗಲಿದೆ. ಎಂಟು ದಿವಸ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ.

ಶೋಭಾಯಾತ್ರೆ: ಜನವರಿ 19, ಶುಕ್ರವಾರದಂದು ತಪೋಭೂಮಿಗೆ ಸಾಯಂಕಾಲ ಪರಮಪೂಜ್ಯ ಜಗದ್ಗುರು
ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಡಾ. ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಮಹಾಸ್ವಾಮಿಗಳು ಆಗಮಿಸಲಿದ್ದು ಧೂಳೀ ಪಾದಪೂಜೆ ನಡೆಯಲಿದೆ. ಮಾರನೆಯ ದಿನ(20ರಂದು) ನೆಹರೂ ಮೈದಾನದಿಂದ ಕೊಪ್ಪೀಕರ ರಸ್ತೆ, ಬ್ರಾಡವೇ, ದುರ್ಗದಬೈಲ, ಮೈಸೂರ ಸ್ಟೋರ್ಸ್, ದಾಜಿಬಾನಪೇಟ, ಚನ್ನಮ್ಮ ಸರ್ಕಲ್,
ಲ್ಯಾಮಿಂಗ್ಟನ್ ರಸ್ತೆ ಮೂಲಕ ನೆಹರೂ ಮೈದಾನಕ್ಕೆ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಮಹಾಸ್ವಾಮಿಗಳು ಹಾಗೂ ಅನೇಕ ಯತಿವರೇಣ್ಯರ ಸನ್ನಿಧಾನದಲ್ಲಿ ವೈಭವದ ಶೋಭಾಯಾತ್ರೆ ನಡೆಯಲಿದೆ.

ಪ್ರತಿದಿನ ಹೋಮ-ಹವನ: ಮುಂಜಾನೆ 5ರಿಂದ ಆರಂಭಗೊಂಡು ಪ್ರತಿದಿನವು ಯತಿವರೇಣ್ಯರ ಸಾನಿಧ್ಯದಲ್ಲಿ, ಋತ್ವಿಜರ ಸಮ್ಮುಖದಲ್ಲಿ ಗಾಯತ್ರ್ಯಾದಿ ದೇವತೆಗಳಿಗೆ ರುದ್ರಾಭಿಷೇಕ, ಕಾಕಡಾರತಿ ಪಾರಾಯಣ, ಮೃತ್ಯುಂಜಯ ಜಪ, ನಾಮಸ್ಮರಣೆ, ಪೂಜೆ, 24 ಸ್ಥಂಡಿಲಗಳಲ್ಲಿ ಗಾಯತ್ರಿ ಹವನ, ಮೃತ್ಯುಂಜಯ ಹೋಮ, ಶತಚಂಡೀ ಪಾರಾಯಣ, ಲಕ್ಷಮೋದಕ ಗಣಪತಿ ಹವನ ಹಾಗೂ ಸುದರ್ಶನ ಹವನ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳು ಯತಿಗಳ ಆಶೀರ್ವಚನದೊಂದಿಗೆ ಪರಿಸಮಾಪ್ತಿಯಾಗಲಿದೆ.

ಪಂಡಿತರಿಂದ ಪ್ರವಚನ: ಧಾರ್ಮಿಕ ಕಾರ್ಯಕ್ರಮದ ಜತೆಗೆ ಪಂಡಿತರಿಂದ ಧಾರ್ಮಿಕ ಪ್ರವಚನಗಳೂ ಇರಲಿವೆ. ಕೊಪ್ಪಳದ ಡಾ.ಧೀರೇಂದ್ರಚಾರ ಬೆಳ್ಳಟ್ಟಿ, ಶಿವಮೊಗ್ಗದ ವಿದ್ವಾನ್ ಎಲ್ ವಾಸುದೇವ ಭಟ್, ಬೆಂಗಳೂರಿನ ಡಾ.ಕೆ.ಜಿ ಸುಬ್ರಾಯ ಶರ್ಮ, ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ವಿದ್ಯಾವಾಚಸ್ಪತಿ ಡಾ.ಪಾವಗಡ ಪ್ರಕಾಶ್ ರಾವ್ ಸೇರಿದಂತೆ ನಾಡಿನ ಪ್ರಮುಖ ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ವೈಭವ: ಮಹಾಯಜ್ಞ ಕಾರ್ಯಕ್ರಮದ ಮತ್ತೊಂದು ಪ್ರಮುಖ ವಿಶೇಷತೆ ಸಾಂಸ್ಕೃತಿಕ ಕಾರ್ಯಕ್ರಮ. ನಾಡಿನ ಪ್ರಖ್ಯಾತ ಕಲಾವಿದರಿಂದ ಭಕ್ತಿ ಗೀತೆ, ವಾದ್ಯಸಂಗೀತ, ನೃತ್ಯ, ಕೀರ್ತನೆ ಇತ್ಯಾದಿ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳಿಗೆ ಸಾಂಸ್ಕೃತಿಕ ಸೊಗಡಿನ ರಸದೌತಣ ಉಣಿಸಲಿದ್ದಾರೆ. ಪ್ರತಿದಿನ ಸಂಜೆ 5ರಿಂದ ಈ ಕಾರ್ಯಕ್ರಮಗಳು ಆರಂಭವಾಗಲಿವೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರಿಂದ ಭಾಷಣ, ಅನುರಾಧಾ ಭಟ್ ಹಾಗೂ ಅಜಯ್ ವಾರಿಯರ್ ಅವರ ಸಂಗೀತ, ಗಾನಕೋಗಿಲೆ ಸಂಗೀತಾ ಕುಲಕರ್ಣಿಯವರ ಗಾಯನ, ಯಶವಂತ ಸರದೇಶಪಾಂಡೆ ಅವರಿಂದ ರಾಶಿಚಕ್ರ ನಾಟಕ, ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯಸಂಜೆ, ಅನಂತ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಇರಲಿವೆ.

ದೇಶದ ಯತಿವರೇಣ್ಯರ ಸಾನಿಧ್ಯ: ಶ್ರೀ ವಲ್ಲಭ ಚೈತನ್ಯರ ಇಚ್ಛೆಯಂತೆ ನಡೆಯುತ್ತಿರುವ 24ನೆ ಕೋಟಿ ಗಾಯತ್ರಿ ಮಹಾಯಜ್ಞಕ್ಕೆ ದೇಶದ ಯತಿಗಳ ದಂಡೇ ತಪೋಭೂಮಿಗೆ ಆಗಮಿಸಲಿದೆ. ದಕ್ಷಿಣಾಮ್ನಾಯ, ಶ್ರೀ ಶೃಂಗೇರಿ ಪೀಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು,
ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಸಮ್ಮುಖದಲ್ಲಿ 18ನೇ ಶ್ರೀ ಗಾಯತ್ರಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಸಹಸ್ರ ಕುಂಭಾಭಿಷೇಕ ನಡೆಯಲಿದೆ. ಇವರೊಂದಿಗೆ ಉಡುಪಿ ಶ್ರೀ ಪೇಜಾವರಮಠದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ಆರ್ಟ್ ಆಫ್ ಲಿವಿಂಗ್ನ ಪರಮಪೂಜ್ಯ ಶ್ರೀ ರವಿಶಂಕರ ಗುರೂಜಿ, ಮೂರುಸಾವಿರಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು ಹಾಗೂ ಉತ್ತರದ ಹಿಮಾಲಯದಿಂದಲೂ ಯತಿಗಳು ಆಗಮಿಸಲಿದ್ದಾರೆ.